Wednesday, 2 November 2016

ನೆನಪಿನಂಗಳದಿಂದ...

ದಟ್ಟ ಕಾನನದ ಹೃದ್ಭಾಗದಲ್ಲೊಂದು ಒಂಟಿ ಮನೆ. ಆ ಒಂಟಿ ಮನೆಯಲ್ಲೊಂದು ಮಿನುಗು ಚಿಮಿಣಿ ದೀಪ. ಆ ಮನೆಯಲ್ಲಿ ಅಮ್ಮ ತನ್ನೆರಡು ಮಕ್ಕಳಿಗೆ ಬಿಸಿ ಬಿಸಿಯಾದ ರೊಟ್ಟಿ ಮಾಡಿ ತಿನ್ನಿಸುತ್ತಿದ್ದಾಳೆ. ಎಲ್ಲರ ಪ್ರೀತಿಯ ಸಾಕು ನಾಯಿ Rambo ತನ್ನ ಮನೆಯೊಡೆಯನ ದಾರಿ ನೋಡಿ ಕುಳಿತಿದ್ದಾನೆ. ಕೊಟ್ಟಿಗೆಯಲ್ಲಿ ಕಟ್ಟಿರುವ ಹಸುಗಳು ಶಾಂತವಾಗಿ ತಾವು ಹಗಲಿಡೀ ಮೆಂದಿರುವ ಆಹಾರವನ್ನು ಮೆಲುಕು ಹಾಕುತ್ತಿವೆ. ಕಾಡಿನಲ್ಲಿ ಮಿಂಚು ಹುಳಗಳದ್ದೇ ಬೆಳಕಿನಾಟ.  ಮನೆಯ ಮುಂದೆ ಭೋರ್ಗೆವ ಭದ್ರೆ ದಟ್ಟಾರಣ್ಯವನ್ನು ಸೀಳಿಕೊಂಡು ಹರಿದು ಹೋಗುತ್ತಿದ್ದಾಳೆ.

ಎಲ್ಲೋ ದೂರದಲ್ಲಿ ಕಾಡು ಕುರಿ ಗೌ ಎಂದು ಜೋರಾಗಿ ಚೀರುತ್ತದೆ. ಬೆನ್ನಿಗೇ  ರಾಂಬೋನ ಬೊಬ್ಬೆ ಶುರು ಆಗುತ್ತದೆ. ಶಬ್ದವನ್ನು ಕೇಳಿದ ಮಕ್ಕಳು ಹೆದರಿಕೊಂಡು ಚಿಮ್ಮುತ್ತವೆ. ಅವುಗಳ ಅಮ್ಮ ಅವನ್ನು ಸಮಾಧಾನ ಪಡಿಸುತ್ತಾ ಕುರಿಯ ಧ್ವನಿ ಮಾತ್ರ ದೊಡ್ಡದು, ಅದು ನೋಡಲು ನಮ್ಮ ಮನೆಯ ಪುಟ್ಟ ಕರು ಚಿತ್ತಾರಿಯ ಹಾಗೆ ಇರುತ್ತದೆ ಅಂದಾಗ ಮಕ್ಕಳು ನಿಟ್ಟುಸಿರಿಡುತ್ತಾರೆ. ರಾಂಬೋ ಕೂಡ ತಣ್ಣಗಾಗುತ್ತಾನೆ.

ಅಷ್ಟರಲ್ಲಿ ಅಪ್ಪನ ಸ್ಕೂಟರ್‌ನ ಕೀಂ ಕೀಂ ಹಾರ್ನ ಕೇಳುತ್ತದೆ. ಮಕ್ಕಳು ಹೋ ಎಂದು ಚಿಮಿಣಿ ದೀಪ ಹಿಡಿದುಕೊಂಡು ಹೊರಗೆ ಓಡುತ್ತಾರೆ. ರಾಂಬೊ ಸಹ ತನ್ನ ಬಾಲವನ್ನು ಆಡಿಸಿಕೊಂಡು ಕುಯ್ಗುಡುತ್ತಾ ಗಾಡಿಯ ಬಳಿ ಓಡುತ್ತಾನೆ. ಅಮ್ಮ ಅಪ್ಪನಿಗೆ ಕೊಡಲು ರೊಟ್ಟಿಯನ್ನು ಬಿಸಿ ಕೆಂಡದ ಮೇಲೆ ಬೇಯಿಸಲು ಸಿದ್ಧವಾಗುತ್ತಾಳೆ.  ಜೊತೆಗೆ ಕುಡಿಯಲು ಮಲೆನಾಡ ಫಿಲ್ಟರ್ ಕಾಪಿಯನ್ನು ತಯಾರಿಸುತ್ತಾಳೆ.

ಅಮ್ಮ, ಅಪ್ಪ, ಮಕ್ಕಳು ಎಲ್ಲರೂ ಒಟ್ಟು ಕೂತು ರೊಟ್ಟಿ ಕಾಪಿಯ ಜೊತೆ ಆ ದಿನದ ಸಮಾಚಾರವನ್ನು ಮಾತನಾಡುತ್ತಾರೆ. ಜೊತೆಗೆ ರಾಂಬೊ ಕೂಡ ಹಾಸಿದ ಗೋಣಿಯ ಮೇಲೆ ಕುಳಿತು ಅಮ್ಮ ಮಾಡಿದ ಬಿಸಿ ರೊಟ್ಟಿಯನ್ನು ಸವಿಯುತ್ತಾನೆ.

ಸಧ್ಯಕ್ಕೆ ನನ್ನ ಬಳಿ ಇರುವ ಚಿತ್ರ. ಇದು ನಾವು ಒಕ್ಕಲನ್ನು ಖಾಲಿ ಮಾಡುವ ದಿನ ತೆಗೆದ ಚಿತ್ರ, ಹಾಗಾಗಿ ಮುಚ್ಚದ ಮಾಡು.